ಪಾಠಕ್, ಗೋಪಾಲ ಸ್ವರೂಪ 
1886-1982 ನ್ಯಾಯವಾದಿ, ಆಡಳಿತ ತಜ್ಞ; ಭಾರತದ ಉಪರಾಷ್ಟ್ರಪತಿಯಾಗಿದ್ದವರು. 1896ರ ಫೆಬ್ರವರಿ 26ರಂದು ಜನಿಸಿದರು. ಲಾಹೋರಿನ ಸರ್ಕಾರಿ ಕಾಲೇಜಿನಲ್ಲಿ ಮತ್ತು ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಉಚ್ಚ ಶಿಕ್ಷಣ ಪೂರೈಸಿದ ಅನಂತರ 1919ರಲ್ಲಿ ಸಂಯುಕ್ತ ಪ್ರಾಂತ್ಯದಲ್ಲಿ (ಈಗಿನ ಉತ್ತರ ಪ್ರದೇಶ) ವಕೀಲಿಯನ್ನಾರಂಭಿಸಿದರು. 1928ರಲ್ಲಿ ಅಲಹಾಬಾದಿಗೆ ಬಂದು ಉಚ್ಚ ನ್ಯಾಯಾಲಯದ ವಕೀಲರಾದರು. ವೃತ್ತಿಯಲ್ಲಿ ಯಶಸ್ಸುಗಳಿಸಿದ್ದ ಅವರನ್ನು 1945ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. ಆದರೆ 1946ರಲ್ಲಿ ಅವರು ಆ ಸ್ಥಾನಕ್ಕೆ ರಾಜೀನಾಮೆಯಿತ್ತು ಪುನಃ ವಕೀಲಿಗೆ ಇಳಿದರು. 1946-1959ರಲ್ಲಿ ಅವರು ಏಳುಸಲ ವಿಶ್ವಸಂಸ್ಥೆಗೆ ಭಾರತೀಯ ನಿಯೋಗದ ಸದಸ್ಯರಾಗಿದ್ದರು. ಆ ನಿಯೋಗದಲ್ಲಿ ಕಾಶ್ಮೀರ ವಿಷಯದಲ್ಲಿ ವಿಶೇಷ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು. 1957ರಲ್ಲಿ ರಾಯಭಾರಿಹುದ್ದೆಗೆ ಸಮನಾದ ಗೌರವ ಸ್ಥಾನದಲ್ಲಿ ಅವರು ಪ್ರಧಾನಮಂತರಿ ನೆಹರೂ ಅವರ ವಿಶೇಷ ಪ್ರತಿನಿಧಿಯಾಗಿ, ಕಾಶ್ಮೀರ ಸಮಸ್ಯೆಯನ್ನು ಕುರಿತಂತೆ 

ಭಾರತದ ನಿಲುವನ್ನು ಅನ್ಯದೇಶಗಳಿಗೆ ಮನದಟ್ಟುಮಾಡಿಕೊಡುವ ಉದ್ದೇಶದಿಂದ ಅನೇಕ ದೇಶಗಳನ್ನು ಸಂದರ್ಶಿಸಿದರು. ತಮ್ಮ ಚಟುವಟಿಕೆಗಳಿಗೆ ದಿಲ್ಲಿಯೇ ಕೇಂದ್ರವಾದಾಗಿನಿಂದ ಅವರು ವರಿಷ್ಠ ನ್ಯಾಯಾಲಯದಲ್ಲಿ ಹಿರಿಯ ವಕೀಲರಾಗಿ ಕಾರ್ಯಮಾಡತೊಡಗಿದರು. 1960ರಲ್ಲಿ ರಾಜ್ಯ ಸಭೆಗೆ ನಿಯುಕ್ತರಾದ ಅನಂತರ ಅವರು ಅನೇಕ ಸಂಸದೀಯ ಸಮಿತಿಗಳ ಸದಸ್ಯರಾಗಿ ಕೆಲಸ ಮಾಡಿದರು. ಪಾಠಕರು 1966-67ರಲ್ಲಿ ಕೇಂದ್ರ ಸರ್ಕಾರದಲ್ಲಿ ಕಾನೂನು ಮಂತ್ರಿಯಾಗಿದ್ದರು. 1967ರ ಮೇ ತಿಂಗಳಿಂದ 1969ರ ಆಗಸ್ಟ್ ವರೆಗೆ ಅವರು ಮೈಸೂರು ರಾಜ್ಯದ (ಈಗಿನ ಕರ್ನಾಟಕ) ರಾಜ್ಯಪಾಲರಾಗಿದ್ದರು. 1969-1974ರಲ್ಲಿ ಅವರು ಭಾರತದ ಉಪರಾಷ್ಟ್ರಪತಿಯಾಗಿದ್ದರು. ಪದನಿಮಿತ್ತ ಅವರು ರಾಜ್ಯಸಭೆಯ ಅಧ್ಯಕ್ಷರೂ ಆಗಿದ್ದರು. ಅವರು ಮೈಸೂರಿನ ರಾಜ್ಯಪಾಲರಾಗಿದ್ದಾಗ ಮೈಸೂರು, ಕರ್ನಾಟಕ, ಬೆಂಗಳೂರು ವಿಶ್ವವಿದ್ಯಾಲಯಗಳಿಗೂ ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯಕ್ಕೂ ಕುಲಾಧಿಪತಿಯಾಗಿದ್ದರು. ಉಪರಾಷ್ಟ್ರಪತಿಯಾಗಿದ್ದಾಗ 1970ರ ಜನವರಿಯಿಂದ ದೆಹಲಿ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿದ್ದರು. ದೇಶದ ಪ್ರಖ್ಯಾತ ನ್ಯಾಯವಾದಿಯಾದ ಅವರಿಗೆ 1970ರ ನವೆಂಬರ್‍ನಲ್ಲಿ ಸಾಗರ ವಿಶ್ವವಿದ್ಯಾಲಯ, 1970ರ ಡಿಸೆಂಬರ್‍ನಲ್ಲಿ ಭಾಗಲಪುರ ವಿಶ್ವವಿದ್ಯಾಲಯ, 1971ರ ಜನವರಿಯಲ್ಲಿ ಕುರುಕ್ಷೇತ್ರ ವಿಶ್ವವಿದ್ಯಾಲಯ ಮತ್ತು 1971ರ ಫೆಬ್ರವರಿಯಲ್ಲಿ ವಿಕ್ರಮ ವಿಶ್ವವಿದ್ಯಾಲಯ ಡಾಕ್ಟರ್ ಆಫ್ ಲಾಸ್ ಗೌರವ ಪದವಿ ನೀಡಿದುವು. 1971ರ ನವೆಂಬರ್‍ನಲ್ಲಿ ದರ್ಭಾಂಗದ ಸಂಸ್ಕøತ ವಿಶ್ವವಿದ್ಯಾಲಯ ಅವರಿಗೆ ವಿದ್ಯಾವಾಚಸ್ಪತಿ ಎಂಬ ಗೌರವ ಪದವಿ ನೀಡಿತು. ನಿವೃತ್ತಿಯ ಅನಂತರ ಪಾಠಕರು ವರಿಷ್ಠ ನ್ಯಾಯಾಲಯದ ವಕೀಲರಾಗಿ ದೆಹಲಿಯಲ್ಲೇ ನೆಲೆಸಿದ್ದರು. ಇವರು 1982ರಲ್ಲಿ ನಿಧನ ಹೊಂದಿದರು.										(ಎಂ.ಎನ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ